Monday, February 23, 2009

ಬಾಲ್ಯದ ನೆನಪೋ......ಮಳೆಯ ಕನಸೋ

ಬಾಲ್ಯದ ನೆನಪು ಇದು ಎಲ್ಲರಲ್ಲೂ ನಗುವ ತರಿಸುವ,ಅಯ್ಯೋ ಮುಗಿದೇ ಹೋಯಿತಲ್ಲ ಮತ್ತೆ ತಿರುಗಿ ಬರುವುದೂ ಇಲ್ಲವಲ್ಲ ಎಂದು ಬೇಸರಿಸಿಕೊಳ್ಳುವ ಜೀವನದ ಸುಂದರ ಕಾಲ. ನನಗಂತೂ ಮಳೆಗಾಲ ಬಂದರೆ ಬಾಲ್ಯದ ನೆನಪುಗಳಿಗೆ ಜೀವ ಬಂದಂತೆ.....ಆ ಮೊದಲ ಮಳೆಯ ಮಣ್ಣಿನ ವಾಸನೆಯ ಜೊತೆಗೆ ನೆನಪುಗಳೂ ಹೊರ ಬಂದಂತೆ.......ಮಳೆಗಾಲ ನನಗೆ ತುಂಬಾ ಇಷ್ಟ..... ಮೇ ತಿಂಗಳಿನ ಬಿಸಿಲಿಗೆ ಕಾದ ಭೂಮಿ ಮಳೆಗಾಲದ ಜೊತೆಗೆ ಹಸಿರಾಗಿ ತನ್ನನು ತಾನು ಸಿಂಗರಿಸಿಕೊಳ್ಳುವ ಆ ರೀತಿ ವಾಹ್......... ಮಳೆಗಾಲ ಅಂದರೆ ನಮಗೆಲ್ಲ ಬೇಸಿಗೆ ರಜೆ ಮುಗಿದು ಹೊಸ ತರಗತಿಗೆ ಹೋಗುವ ಸಂಭ್ರಮ.ಜೊತೆಗೆ ಅಮ್ಮ ತರುವ ಹೊಸ ಸ್ಕೂಲ್ ಬ್ಯಾಗ್,ಹೊಸ ರೇನ್ಕೋಟ್...........ಕ್ಲಾಸ್ ಟೀಚರ್ ಯಾರು ಎನ್ನುವ ಕುತೂಹಲ,ಒಟ್ಟಾರೆ ಮಳೆಗೂ,ಬಾಲ್ಯಕ್ಕೂ,ನೆನಪಿಗೂ ಕನಸಿಗೂ ಏನೋ ಹೊಂದಾಣಿಕೆ. ಎಲ್ಲರಿಗೂ ಬಾಲ್ಯ ಮುಗಿಯುವುದು ಸಹಜ ಅದನ್ನ ನೆನಪಿಸಿಕೊಳ್ಳುವುದು ಅಷ್ಟೆ ಸಹಜ.ಆದರೆ ನಾನು ಈಗ ಆರು ವರ್ಷಗಳಿಂದ ಮಳೆಯನ್ನು ಸಹ ನೆನಪಿಸಿಕೊಳ್ಳುತ್ತಾ ಇರುತ್ತೇನೆ....ಇದೇನು ಮಳೆಯೂ ನನಗೆ ಬರೀ ನೆನಪಾಗಿ ಹೋಯಿತು ಅಂತ ಬೇಸರಿಸಿಕೊಳ್ಳುತ್ತ ಇರುತ್ತೇನೆ.ಇದಕ್ಕೆ ಕಾರಣ ನಾವಿರುವುದು ದುಬೈ ಮರಳುಗಾಡಿನ ಸುಂದರಿಯ ಮಡಿಲಲ್ಲಿ...ಇದಕ್ಕೊ ಮಳೆ ಅಂದರೆ ಅಲೆರ್ಜಿ.... ವರ್ಷದಲ್ಲಿ ಬರುವ ಎರಡು ಮೂರು ಸಣ್ಣ ಮಳೆಗೂ ಹೆದರುವ ಈ ಸುಂದರಿ ನನ್ನ ಮಳೆಯ ಆಸೆಯನ್ನು ನೆನಪನ್ನು ತೀರಿಸಲಾರಳು.ಇಲ್ಲಿಗೆ ಬಂದು ಆಗಲೇ ನಾಲ್ಕು ವರ್ಷ ಮುಗಿದಿದೆ ಮೊದಲಿನ ಎರಡು ವರ್ಷದಲ್ಲಿ ಒಂದು ವರ್ಷ ಗುಜರಾತಿನ ಮರಭೂಮಿ ನನ್ನ ಮಳೆಗಾಲವನ್ನು ಕದ್ದರೆ,ಇನ್ನೊಂದು ವರ್ಷ ನನ್ನ ಮಗಳು ಹುಟ್ಟಿದ ಸಂಭ್ರಮದಲ್ಲಿ,ಬಾಳನ್ಥಿ ಎಂಬ ನೆಪದಲ್ಲಿ ನನ್ನ ರೂಮಿನಿಂದ ಹೊರಗೆ ಬಿಡಲಿಲ್ಲ......ಒಟ್ಟು ಆರು ವರ್ಷದ ವಿರಹ..........ಹಾ ಹಾ ಹಾ ಮೊನ್ನೆ ಮಗಳನ್ನ ಸ್ಕೂಲ್ ಬಸ್ ಹತ್ತಿಸಲು ಹೊರ ಹೋದಾಗ ಆಶ್ಚರ್ಯ.......ಸಣ್ಣ ಮಳೆ ಹನಿ.ಮಗಳಿಗೆ "ಬೇಗ ಒಳಗೆ ಬಾ ನಾಳೆ ಜ್ವರ ಬತ್ತು"ಹೇಳುತ್ತಾ ಬಸ್ ಬರುವ ವರೆಗೆ ಒಂದು ಬಿಲ್ಡಿಂಗ್ ಒಳಗೆ ನಿಲ್ಲಿಸಿಕೊಂಡು ಬಸ್ ಬಂದ ಮೇಲೆ ಮಳೆಯಲ್ಲಿ ನೆನೆಯದಂತೆ ಬೇಗ ಬೇಗ ಬಸ್ ಹತ್ತಿಸಿ ಮನೆಗೆ ಬಂದೆ.ಮನೆಗೆ ಬಂದು ಬಾಲ್ಕನಿ ಹತ್ತಿರ ಚೇರ್ ಹಾಕಿಕೊಂಡು,ಒಂದು ಕಾಫೀ ಮುಗ ಹಿಡಿದು ಕುಳಿತೆ ಮಳೆ ಹಾಗೆ ಸಣ್ಣಗೆ ಹನಿತ ಇತ್ತು.....ನನಗೆ ಆ ಹೊತ್ತಿನಲ್ಲಿ ನೆನಪಿಗೆ ಬಂದಿದ್ದು ನಾನು ನನ್ನ ಮಗಳ ಹಾಗೆ ಪ್ರೈಮರಿ ಸ್ಕೂಲಿಗೆ ಹೋಗುವಾಗ ಮಳೆಯಲ್ಲಿ ಛತ್ರಿ ಹಿಡಿದು ನೀರಿನಲ್ಲಿ ಆಟ ಆಡಿಕೊಂಡು ಸ್ಕೂಲಿಗೆ ಹೋಗ್ತಾ ಇದ್ದಿದ್ದು.ಒಳಗೆ ಟೀಚರ್ ಪಾಠ ನನಗೋ ಹೊರಗೆ ಮಳೆ ನೋಡುವಾಸೆ.....ಟೀಚೆರಿಗೆ ಗೊತ್ತಾದ್ರೆ ಅಂತ ಹೆದರಿಕೆ ಬೇರೆ,ಹಾಗೆ ನನ್ನ ನೆನಪನ್ನು ನಿಲ್ಲಿಸಿದ್ದು ನನ್ನವರ ಫೋನ್ ಕಾಲ್.